ಆಂಗ್‍ಸ್ಟ್ರಾಮ್, ಆಂಡರ್ಸ್‍ಯೊನಸ್
(1814-1874). ಸ್ವೀಡನ್ನಿನ ಭೌತಶಾಸ್ತ್ರಜ್ಞ. ಲಗ್ಡ ಎಂಬಲ್ಲಿ 1814ನೆಯ ಆಗಸ್ಟ್ 13ರಂದು ಜನಿಸಿದ. ಉಪ್ಸಾಲ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾಭ್ಯಾಸ ಮಾಡಿ ಅಲ್ಲಿಯ ವಿದ್ಯಾಲಯದಲ್ಲಿಯೆ ಶಿಕ್ಷಕನಾದ (1839). ಮುಂದೆ ಸ್ಟಾಕ್ ಹೋಮ್ ವೇದಶಾಲೆಯಲ್ಲಿ ಅನುಭವಗಳಿಸಿ ಉಪ್ಸಾಲ ವೇದಶಾಲೆಯಲ್ಲಿ ವೀಕ್ಷಕನಾದ (1843). ಭೂಮಿಯ ಕಾಂತತ್ವದ ವಿಷಯದಲ್ಲಿ ವಿಶೇಷ ಶೋಧನೆಗಳನ್ನು ನಡೆಸಿದ. 1858ರಲ್ಲಿ ಉಪ್ಸಾಲದಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕನಾದ. ಅದುವರೆಗೂ ಬೇರೆ ಬೇರೆ ವೈಜ್ಞಾನಿಕರು ವಸ್ತುಗಳ ಉಷ್ಣವಾಹಕತ್ವವನ್ನು (ಥರ್ಮಲ್ ಕಂಡಕ್ಟಿವಿಟಿ) ಕಂಡುಹಿಡಿಯುವುದರಲ್ಲಿ ಒಂದಕ್ಕೊಂದಕ್ಕೆ ಸಂಪೂರ್ಣ ಅಸಂಗತಗಳಾದ ಮೌಲ್ಯಗಳು ದೊರೆತಿದ್ದು ಅವ್ಯವಸ್ಥೆಯಿತ್ತು. ಆಂಗ್‍ಸ್ಟ್ರಾಂ ಹೊಸ ಮಾರ್ಗದಿಂದ ಈ ಗುಣವನ್ನು ಅಳೆದು ಸಂಗತವಾದ ಮೌಲ್ಯಗಳು ದೊರೆಯುವುದಕ್ಕೆ ಕಾರಣನಾದ. ಆಗ ಇನ್ನೂ ಶೈಶವಾವಸ್ಥೆಯಲ್ಲಿದ್ದ ರೋಹಿತ ದರ್ಶಕ ಶಾಸ್ತ್ರದಲ್ಲಿಯೂ (ಸ್ಟೆಕ್‍ಟ್ರೋಸ್ಕೊಪಿ) ಇವನು ಮೊದಲಿಗಿಂತ ಹೆಚ್ಚು ನಿಷ್ಕøಷ್ಟವಾದ ರೀತಿಯಲ್ಲಿ ಸೂರ್ಯನ ರೋಹಿತ ರೇಖೆಗಳ ತರಂಗಮಾನಗಳನ್ನಳೆದು (ವೇವ್‍ಲೆಂಗ್ತ್ಸ್) ನಿರ್ಮಿಸಿದ ಪಟ ಬಹುಕಾಲ ಆದರ್ಶಪ್ರಾಯವಾಗಿತ್ತು. ತರಂಗಮಾನಗಳನ್ನಳೆಯಲು 10-8 ಸೆಂಮೀ ಎಂಬುದನ್ನು ಏಕಮಾನವಾಗಿಟ್ಟು ಕೊಳ್ಳಬೇಕೆಂದು ಇವನೇ ಸೂಚಿಸಿದುದರಿಂದ ಅದಕ್ಕೆ ಆಂಗ್‍ಸ್ಟ್ರಾಮ್ ಏಕಮಾನವೆಂದೇ ಹೆಸರಾಗಿದೆ. ಸೂರ್ಯನಲ್ಲಿ ಜಲಜನಿಕವಿರುವುದೆಂದೂ ಈತ ಸಾಧಿಸಿದ. 1867ರಲ್ಲಿ ಅರೊರಾ ಬೊರಿಯಾಲಿಸ್ ಬೆಳಕಿನ ರೋಹಿತವನ್ನೂ ಇವನು ಪರೀಕ್ಷಿಸಿ, ಅದರ ಮುಖ್ಯರೇಖೆಯ ತರಂಗದೂರವನ್ನು ಕಂಡುಹಿಡಿದ. ಇವನಿಗೆ 1872ರಲ್ಲಿ ರಾಯಲ್‍ಸೊಸೈಟಿಯ ರುಮ್‍ಫರ್ಡ್ ಪದಕ ಲಭಿಸಿತು. ಆಂಗ್‍ಸ್ಟ್ರಂ 1874ನೆಯ ಜೂನ್ 21ರಂದು ಕಾಲವಾದ.					
(ಟಿ.ಎಸ್.ಎಸ್.)

ಆಂಗ್‍ಸ್ಟ್ರಂನ ಮಗ ನಟ್‍ಯೋಹನ್ ಆಂಗ್‍ಸ್ಟ್ರಂ (1857-1910) ಉಪ್ಸಾಲದಲ್ಲಿಯೇ ಭೌತಶಾಸ್ತ್ರ ಪ್ರಾಧ್ಯಾಪಕನಾದ (1896). ಸೌರಉಷ್ಣದ ವಿಸರಣೆ ಮತ್ತು ಭೂಮಿಯ ವಾಯುಮಂಡಲದಿಂದ ಅದರ ಹೀರುವಿಕೆ ಇವುಗಳನ್ನು ಕುರಿತು ಸಂಶೋಧನೆ ನಡೆಸಿದ. ಈ ದಾರಿಯಲ್ಲಿ ಹಲವಾರು ಸೂಕ್ಷ್ಮೋಪಕರಣಗಳನ್ನೂ (ಉದಾ : ಎಲೆಕ್‍ಟ್ರಿಕ್ ಕಾಂಪೆನ್‍ಸೇಷನ್ ಪೈರ್‍ಹೀಲಿಯೋಮೀಟರ್, 1893, ಅತಿರಕ್ತ ರೋಹಿತದ ಫೋಟೋಸೂಚಕ ಉಪಕರಣ 1895) ಸೂಕ್ಷ್ಮ ವಿಧಾನಗಳನ್ನೂ ಕಂಡುಹಿಡಿದ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ